ಜಟ್ಲೆಂಡ್ ಕದನ

	ಒಂದನೆಯ ಮಹಾಯುದ್ಧದಲ್ಲಿ ನಡೆದ ದೊಡ್ಡ ಸಮುದ್ರಕದನ. 1916ರ ಮೇ 31ರಂದು ನಡೆಯಿತು. ಆ ಕಾಲದ ಪ್ರಸಿದ್ಧ ಬ್ರಿಟಿಷ್ ಮತ್ತು ಜರ್ಮನ್ ನೌಕಾದಳಗಳು ಡೆನ್ಮಾರ್ಕಿನ ಪಶ್ಚಿಮಕ್ಕೆ ಉತ್ತರ ಸಮುದ್ರದಲ್ಲಿ ಒಂದನ್ನೊಂದು ಎದುರಿಸಿದುವು. 28 ಸಮರ ನೌಕೆಗಳು, 9 ಸಮರ ಕ್ರುಯಿಸûರ್‍ಗಳು, 33 ಕ್ರುಯಿಸûರ್‍ಗಳು ಮತ್ತು ಡಿಸ್ಟ್ರಾಯರ್‍ಗಳು-ಇದು ಬ್ರಿಟಿಷ್ ದಳದ ಬಲ. ಜರ್ಮನ್ ದಳದಲ್ಲಿ 22 ಸಮರ ನೌಕೆಗಳು, 5 ಸಮರ ಕ್ರುಯಿಸûರ್‍ಗಳು, 11 ಲಘು ಕ್ರುಯಿಸûರ್‍ಗಳು ಮತ್ತು 72 ಡಿಸ್ಟ್ರಾಯರ್‍ಗಳಿದ್ದವು. ಬ್ರಿಟಿಷ್ ದಳಗಳಿಗೆ ಜೆಲಿಕೋ, ಜರ್ಮನ್ ದಳಗಳಿಗೆ ಷೀರ್ ನಾಯಕರಾಗಿದ್ದರು.

	ಅಂದಿನ ಯುದ್ಧದಲ್ಲಿ ಎಡು ಪಡೆಗಳಿಗೂ ಸಾಕಷ್ಟು ನಷ್ಟ ಉಂಟಾಯಿತು. ಜರ್ಮನರು ತಮಗೆ ಗೊತ್ತಿಲ್ಲದೆಯೇ ತಮ್ಮದಕ್ಕಿಂತಲೂ (45,000 ಸೈನಿಕರು) ದೊಡ್ಡದಾಗಿದ್ದ ಬ್ರಿಟಿಷ್ ಬಲವನ್ನು (60,000 ಸೈನಿಕರು) ಆಕಸ್ಮಿಕವಾಗಿ ಎದುರಿಸಬೇಕಾಯಿತು. ಜರ್ಮನ್ ದಳವನ್ನು ಸುತ್ತುವರಿಯುವುದರಲ್ಲಿ ಜೆಲಿಕೋ ಸಫಲನಾದ. ಅಗಾಧ ಬ್ರಿಟಿಷ್ ದಳವನ್ನು ಕಂಡ ಜರ್ಮನ್ ನೌಕೆಗಳು ತಮ್ಮ ನೆಲೆಗೆ ಹಿಂದಿರುಗಿದುವು. ಅಂತೆಯೇ ಬ್ರಿಟಿಷ್ ದಳಗಳೂ ಹಿಂದಿರುಗಬೇಕಾಯಿತು. ಸೋಲು ಗೆಲುವಿನ ಇತ್ಯರ್ಥವಾಗದೆ ಎರಡೂ ಪಡೆಗಳೂ ಹಿಂದೆಗೆದರೂ ಇದರ ಪರಿಣಾಮ ಜರ್ಮನರ ಮೆಲೆ ವಿಶೇಷವಾಗಿ ಆಯಿತು. ಅಂದಿನಿಂದ ಜರ್ಮನರ ಸಾಗರ ಪ್ರಭುತ್ವ ಕುಂದಿತು.

	ಹೋರಾಟದಲ್ಲಿ ತೊಡಗಿದ್ದ ತಂಡಗಳ ಸಾಮಥ್ರ್ಯ ಮತ್ತು ತೀಕ್ಷ್ಣತೆ ಇವುಗಳನ್ನು ಗಮನದಲ್ಲಿಟ್ಟುಕೊಂಡರೆ, ಟ್ರಫಾಲ್‍ಗರ್ ಕದನದ ಅನಂತರ ನಡೆದ ಕಡಲ ಕದನಗಳಲ್ಲಿ, ಇದು ಇತಿಹಾಸದಲ್ಲಿ ಒಂದು ದೊಡ್ಡ ಕದನವೆಂದು ಹೇಳಬಹುದು. ಇದರಲ್ಲಿ ಜರ್ಮನರಿಗಿಂತ ಬ್ರಿಟಿಷರೇ ಹೆಚ್ಚು ಕಷ್ಟನಷ್ಟಗಳನ್ನು ಅನುಭವಿಸಿದರು. ಈ ಕದನದಲ್ಲಿ ಬ್ರಿಟಿಷರು 3 ಯುದ್ಧ ನೌಕೆಗಳ, 3 ಇತರ ನೌಕೆಗಳು, 8 ಟಾರ್‍ಪೆಡೊ ದೋಣಿಗಳನ್ನು ಕಳೆದುಕೊಂಡರು. ಇದಕ್ಕೆ ಪ್ರತಿಯಾಗಿ ಜರ್ಮನರ ಒಂದು ಯುದ್ಧ ನೌಕೆ, ಒಂದು ಕದನ ನೌಕೆ, 4 ಹಗುರ ನೌಕೆಗಳು ಮತ್ತು 5 ಟಾರ್‍ಪೆಡೊ ದೋಣಿಗಳು ನಾಶವಾದವು. ಬ್ರಿಟಿಷ್ ಪಡೆಯ 6,274 ಅಧಿಕಾರಿಗಳು ಮತ್ತು ಸೈನಿಕರು ಸತ್ತರು ಅಥವಾ ಕೈಸೆರೆಯಾದರು. ಜರ್ಮನಿಯ ಕಡೆ ಅಧಿಕಾರಿಗಳು ಮತ್ತು ಸೈನಿಕರು ಸೇರಿದಂತೆ 2,545 ಮಂದಿ ಸತ್ತರು. ಹೆಚ್ಚು ಸಾವುನೋವು ಅನುಭವಿಸಿದರೂ ಉತ್ತರ ಭಾಗದಲ್ಲಿ ಬ್ರಿಟಿಷ್ ದಳ ಮೇಲುಗೈ ಪಡೆಯಿತು. ಯುದ್ಧದ ಉಳಿದ ಕಾಲದಲ್ಲಿ ಜರ್ಮನ್ ದಳ ಮೂರು ಸಾರಿ ಮಾತ್ರ ತನ್ನ ರೇವು ಬಿಟ್ಟು ಹೊರಬರಲು ಪ್ರಯತ್ನಿಸಿತು. ಆದರೆ ಎರಡು ಸಂದರ್ಭಗಳಲ್ಲಿ ಶೀಘ್ರವಾಗಿ ತನ್ನ ನೆಲೆಗಳಿಗೆ ಹಿಂದಿರುಗಬೇಕಾಯಿತು. 1918ರ ನವೆಂಬರಿನಲ್ಲಿ ಸಮುದ್ರಕ್ಕೆ ಇಳಿಯುವಂತೆ ಮತ್ತೆ ಅದಕ್ಕೆ ಆಜ್ಞಾಪಿಸಿದಾಗ ಜರ್ಮನ್ ನೌಕಾದಳದಲ್ಲಿ ದಂಗೆ ಎದ್ದಿತು. ಇದು ಜರ್ಮನ್ ಪ್ರಭುತ್ವ ಅಳಿಯುವುದರ ಸೂಚನೆಯೂ ಆಗಿತ್ತು. ಜಟ್‍ಲಂಡ್ ಕದನದಲ್ಲಿ ತಾವು ಗೆದ್ದೆವೆಂದು ಜರ್ಮನರು ಹೇಳಿಕೊಂಡರೂ ಬ್ರಿಟಿಷ್ ನೌಕಾದಳದ ಶಕ್ತಿಯನ್ನು ಕುಂದಿಸುವುದು ಅವರಿಂದಾಗಲಿಲ್ಲ; ಅವರು ಅದಕ್ಕೆ ಪ್ರಯತ್ನಿಸಲೂ ಇಲ್ಲ. ಇಂಗ್ಲೆಂಡ್, ಫ್ರಾನ್ಸ್, ಇಟಲಿ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿನ ಪ್ರಜಾಪ್ರಭುತ್ವ ಹಾಗೂ ಮಿಕ್ಕೆಡೆಗಳಲ್ಲಿಯ ಸ್ವಾತಂತ್ರ್ಯವನ್ನು ರಕ್ಷಿಸುವುದು ಈ ಕದನದಿಂದ ಬ್ರಿಟಿಷರಿಗೆ ಸಾಧ್ಯವಾಯಿತು.						(ಎಚ್.ವಿ.ಎಸ್.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ